Sunday, December 13, 2009

"ಮುಗ್ದತೆ"

ಹಕ್ಕಿಯು ಹಾರಿತ್ತು ಆಹಾರಕ್ಕೆಂದು
ಗೂಡಲ್ಲಿ ಇಟ್ಟಿತ್ತು ಮೊಟ್ಟೆಯನು ಒಂದು
ಹಾವೊಂದು ಬಂದಿತು ಸರಿದಾಡಿಕೊಂಡು
ಮೊಟ್ಟೆಯು ಸೂಸಿದ್ದ ವಾಸನೆಯ ಹಿಡಿದು

ಖುಷಿಯಾಯ್ತು ಹಾವಿಗೆ ಯಾರಿಲ್ಲ ಎಂದು
ಎಡೆಯತ್ತಿ ನಿಂತಿತು ತಿನ್ನೊಣವೆಂದು

ಮೊಟ್ಟೆಯಲಿ ಮಲಗಿದ್ದ ಹಕ್ಕಿಮರಿ ಎದ್ದು
ಮೊಟ್ಟೆಯನು ಹೊಡೆದು ಹೊರಬಂದು
ಎಡೆಯೆತ್ತಿ ನಿಂತಿದ್ದ ಹಾವನ್ನು ಕಂಡು
ತಬ್ಬಿ ಪ್ರೀತಿಯಲಿ ಮುತ್ತಿಟ್ಟು 'ಅಮ್ಮಾ'ಅಂತು

ಹಾವಿಗೆ ಭಯವಾಯ್ತು ಪ್ರೀತಿಯ ಅರಿವಾಯ್ತು
ಮರಳಲ್ಲಿ ತಾನಿಟ್ಟ ಮೊಟ್ಟೆಯ ನೆನಪಾಯ್ತು
ಆ ಹಕ್ಕಿ ಮರಿಗೆ ಪ್ರತಿಯಾಗಿ ಮುತ್ತಿಟ್ಟು
'ನಿನ್ನಮ್ಮ ಬರುತಾಳೆ ಇರುಮಗು' ಎಂದು
ಮುಜುಗರದಿ ಹೊರಟೊಯ್ತು..

ಆ ಹಕ್ಕಿ ಮರಿಯು ಅಮ್ಮ.. ಅಮ್ಮಾ...
ಕೂಗಿತಲೇ ಇತ್ತು.

"ನನ್ನವ್ವ"

ಜನ್ಮ ನೀಡಲು ತಿಂದ ನೋವುಗಳೆಷ್ಟೋ
ಬದುಕುಳಿಯಲು ಕಟ್ಟಿದ ಹರಕೆಗಳೆಷ್ಟೋ
ಉಪವಾಸವಿದ್ದು ನೀಡಿದ ಕೈತುತ್ತುಗಳೆಷ್ಟೋ

ಕಣ್ಣೀರ ಒರೆಸಿ, ಬರವಸೆಯ ತರಿಸಿ
ಚೂರು ರೊಟ್ಟಿಯ ತಿನಿಸಿ,ಕಟ್ಟಿ ಪ್ರೀತಿಯ ಬುತ್ತಿ
ಶಾಲೆಗೆ ಕಳುಹಿಸಿದ ಮೊದಲ ದಿನವೇ
ಭವಿಷ್ಯದ ಸಸಿ ನೆಟ್ಟಳು ನನ್ನವ್ವ

ಹಸಿಯಾದ ಮನದಲ್ಲಿ ಆಲದ ಮರ ಬೆಳೆಸಿ
ಬದುಕು-ಕಟ್ಟುವ ಕನಸು ವಿಶ್ವಾಸ ಮೂಡಿಸಿ
ನೈತಿಕತೆ ಕೈಹಿಡಿಸಿ ನನ್ನನ್ನು ನಡೆಸಿ
ಎಲ್ಲರನು ಗೌರವಿಸು, ನಕ್ಕು-ನಗಿಸು
ಬದುಕಿಸಿ-ಬದುಕು ಹೊರಡೆಂದಳು ನನ್ನವ್ವ

ಬೆಳಗುತಿದೆ ಇಂದಿಗೂ ಅವ್ವ ಹಚ್ಚಿದ ಹಣತೆ
ಹರಿಯಲಿ ಮುಂದೆಯೂ ಅ ಪ್ರೀತಿ-ಸ್ನೆಹದ ಒರತೆ
ಬ್ರಂಹಾಂಡ ಸೃಷ್ಠಿಸುವ ಓ ಸೃಷ್ಠಿಬ್ರಹ್ಮನೇ
ಬರೆದುಬಿಡು ಈಗಲೇ ಮುಂದಿನ ಜನ್ಮಕೂ
ಇರಲಿ ನನಗೆ ಈ ನನ್ನ ‘ಅಮ್ಮ’ನೆ

"ನೀವೇಕೆ ಹೀಗೆ?"

ಈ ಹುಡಿಗಿಯರೇ ಹೀಗೆ
ಹೂವಿನ ಹಾಗೆ
ಬಳ್ಳಿಯಂತೆ ಬಳುಕುತ್ತ
ಕಣ್ಣ ಅಯಸ್ಕಾಂತ ನೂಟ ಬೀರಿ
ಹುಡುಗರನ್ನು ತಮ್ಮೆಡೆಗೆ
ಸೆಳೆಯುತ್ತಾರೆ ಕೆಲವೇ ಕ್ಷಣಗಳಲ್ಲಿ

ಹುಡುಗರೆದೆಗಳು ಗುಡಿಗಳಾಗಿ
ಇವರು ದೇವತೆಗಳಾಗುತ್ತರೆ ಅಲ್ಲಿ,
ಅನುದಿನವು ಅನುಕ್ಷಣವು ಇವರದೇ
ಧ್ಯಾನ-ಆರಾಧನೆ,

ಕಾಲಸರಿದಂತೆ
ಕ್ರಮೇಣ ಮೆದುಳನ್ನು ತೋಳೆದು,
ವಾಸ್ತವತೆ ಮರೆಸಿ ನಿಗೂಡವಾಗಿ
ಮಾಯವಾಗುತ್ತಾರೆ ಮತ್ಯಾರೊ
ಭಕ್ತರೆದೆಗಳಲಿ ದೇವತೆಗಳಾಗಿ ಮೆರೆಯಲು
ಈ ಹುಡಿಗಿಯರು..!
ಈ ಹುಡಿಗಿಯರೇ ಹೀಗೆ
ಹೂವಿನ ಹಾಗೆ

"ನಿನ್ನ ನೆನಪು"

ನಿನ್ನ ನಿನಪ ಹೂವ ಬನದಿ
ಹಾರುತಿರುವೆ ದುಂಬಿಯಾಗಿ
ಸಿಹಿಯ ಕೊಡು ಬಾರೆ ನಲ್ಲೆ
ನಿನ್ನ ಮೊಗವ ತೊರಿನಂಗೆ

ನಿನ್ನ ಕೊರಳ ಹಾರದಲ್ಲಿ
ಮುತ್ತು-ರತ್ನ-ಹವಳದಂಗೆ
ಅಪ್ಪಿ ನಿನ್ನ ತಬ್ಬಿಕೊಂಡು
ಮುತ್ತು ಕೊಡುವ ಆಸೆ ನಂಗೆ

ಮೊದಲ ನೊಟದಲ್ಲೆ ನೀನು
ಏನೊ ಮೊಡಿ ಮಾಡಿ ಬಿಟ್ಟೆ
ನಿನ್ನ ಪ್ರೀತಿ ನಶೆಯ ಒಳಗೆ
ನಾ ಊಟ-ನಿದ್ರೆ ಮರೆತು ಬಿಟ್ಟೆ

ಹಚ್ಚಿ ಇಟ್ಟ ಪ್ರೀತಿ-ದೀಪ
ಬೆಳಗುತಿರಲಿ ದೃದಯದೊಳಗೆ
ನೀನು ನನಗೆ ಸಿಗದೆ ಹೊದ್ರು
ಆರದಿರಲಿ ಕೊನೆಯವರೆಗೆ.

"ಸುಟ್ಟುಬಿಡು"

ಸುಟ್ಟುಬಿಡು ಬೆಂಕಿಯೇ
‘ನಾನು’ ಎನ್ನುವ
ನನ್ನೊಳಗಿನ ನನ್ನನ್ನು

ನೀತಿಯಿಲ್ಲದೆ ಬೆಳೆವ,
ಅರ್ಥವಿಲ್ಲದೆ ಕವಿವ
ಭಾವನೆಯ ನೆಲೆಯನ್ನು

ಹತ್ತಿಬಿಡು ನೀನಿನ್ನು
ಸ್ವಾರ್ತಿಗಳ ಬೆನ್ನನ್ನು
ಪ್ರೀತಿ ಕರುಣೆಯ ಬಿಟ್ಟು
ನಂಬಿಕೆಗೆ ಕೈಕೊಟ್ಟು
ಹಣಕಾಗಿ ಜೋತಾಡೊ
ಜೀವಂತ ಹೆಣಗಳನು
ಸುಟ್ಟುಬಿಡು ಬೆಂಕಿಯೇ
ಸುಟ್ಟುಬಿಡು ಅವರನ್ನು

ಧರ್ಮ-ದೇವರ ಹೆಸರೆತ್ತಿ,
ತಾರ-ತಮ್ಯದ ನೆಲದಿ
ವಿಷಬೀಜ ಬಿತ್ತಿ, ಡಾಂಬಿಕತೆ
ಹರಡುವ ರೋಗಾಣು ಜನರನ್ನು
ಸುಟ್ಟುಬಿಡು ಬೆಂಕಿಯೇ
ಸುಟ್ಟುಬಿಡು ಅವರನ್ನು

ಕಳ್ಳರು-ಮಳ್ಳರು
ವಿಕೃತರು-ವಂಚಕರು
ಬಿಡಬೇಡ ಯಾರನ್ನು
ನನ್ನೊಳಗೂ ಇದ್ದಾರು !
ಬಿಡಬೇಡ ನನ್ನನ್ನು
ಸುಟ್ಟುಬಿಡು ಬೆಂಕಿಯೇ
‘ಸುಟ್ಟುಬಿಡು’

“ಕವನ”

ದಿನ ಕಾಯುವ
ಬಸುರಿಯೊಳಗಿನ
ಮಗುವಿನಂತೆ ಕವನ
ಹುಟ್ಟಿ ಬಿಡುತದೆ ಎಲ್ಲೊ,
ಯಾವ ಕ್ಷಣದಲ್ಲೊ!

ನೆನಪುಗಳು ಕದಲಿ
ಚೆಲ್ಲುವ ಹನಿಗಳ ಮಿಲನ
ಅಂತರಾಳದ ಭಾವನೆಗಳು
ಕೂಡುವ ಮೈಥುನ

ಮಡುಗಟ್ಟಿ ತೆಲುತದೆ ಕಲ್ಪನೆ,
ಗರಿಕೆದರಿ ಹಾಡುತದೆ
ಮನ ಸುಮ್ಮನೆ!

ತನು ತಾನು ಮೈಮರೆತು
ಅಂತರಾಳವ ಬಿಚ್ಚಿ
ಜೀವ ಸ್ರಷ್ಠಿಯ ಮೀಟಿ
ಹೊರಡುವ ಹೊಸರಾಗ
‘ಕವನ’

"ಸ್ವಾಗತ"

ಬನ್ನಿ
ಸ್ನೇಹಿತರೆ ನಿಮಗೆಲ್ಲಾ
'ಸ್ವಾಗತ'
ನಮ್ಮಮ್ಮ ಕನ್ನಡಮ್ಮ ಕಲಿಸಿದ್ದು
'ಮಾನವೀಯತೆ ' ಯ ಕಾಗುಣಿತ
ಮುಂದಿನದೆಲ್ಲಾ
ಬರವಸೆಯ ಅಕ್ಷರಗಳ ಬರೆದು
ಪ್ರೀತಿಯ ಕೊಂಬು,ಧೀರ್ಘ,ಒತ್ತುಗಳ ಎಳೆದು,
'ಶೂನ್ಯ-ಅನಂತತೆ'ಯ
ನಡುವಿನ ಬದುಕಿಗೆ ಅರ್ಥಬದ್ದ
ಪ್ರಾಸ ಕೂಡಿಸುವ ಬಲುಸರಳ
ಗಣಿತ

"ಅರ್ಪಣೆ"

ಪಂಚಭೂತಗಳ ಹಿಡಿದು
ತನ್ನ ಜೀವದಿ ಬೆಸೆದು
ಪ್ರೀತಿ ಅಮೃತವ ತುಂಬಿ
ಜಾಣ ರೆಕ್ಕೆಯ ಬೆಳಸಿ
ಜ್ಞಾನದ ಆಗಸಕ್ಕೆ ಹಾರಿಬಿಟ್ಟ
ಮಾತೃ ದೃದಯಕ್ಕೆ
'ಅರ್ಪಣೆ'

Monday, August 10, 2009

ಕಲೆ

ಮರೆತರೂ
ಮರೆಯಾಗಿ
ಕಾಡುವ
ನೆನಪು,
ನೆಪ ಹೇಳಿ
ಹೋಗುವುದು
ಎದೆಯ ಮೇಲೆ
ನಿನ್ನ ಗುರುತಾಗಿ
ಉಳಿದ
ಹೆಸರಿನ ಬಳಿಗೆ

Saturday, August 8, 2009

ಬಂದ

ನಲ್ಲೇ,

ನಿನ್ನ ತುಟಿಯೊಳಗಿನ ಕಾಂತದಿ ಸೆಳೆದು

ನನ್ನ ಚುಂಬಿಸಿ ನೋಡು, ಮತ್ತೇರಿ

ಮನ ಬೆತ್ತಲಾಗುತದೆ ಕತ್ತಲೊಳಗಿನ

ಮಾಯಾ ಲೊಕಕೆ ನುಗ್ಗಿ, ಬೆರಳು

ಬಿಡಿಸುವ ಚಿತ್ರಕೆ ನೀ ಸ್ಪರ್ಶವಾಗಿ

ಮಿಡಿದರೆ ಬಾವಗಳ ಮೀರಿದ ,

ಬಂದವಾಗುತದೆ ನಮ್ಮ ಮಿಲನ

ಬಾನಲ್ಲೆ! 'ಪ್ರೀತಿ'

ಬಾನಿನಲ್ಲಿ ಪ್ರೀತಿ ಗೂಡು ಕಟ್ಟಿ

ಹಕ್ಕಿಯಾಗಿ ಹಾರಿ ಮೋಡ ದಾಟಿ

ಹಾಡೋಣ ಪ್ರೇಮ ಗೀತೆಯ

ಬಿದಿಗೆ ಚಂದ್ರ ತೇಲುತ ಬಂದ

ಬೆಳ್ಳಿ ಬೆಳಕು ನಮಗೆ ತಂದ

ಎದ್ದು ನಿಂತವು ಮೋಡದ ಮರೆಯಲಿ

ಎಲ್ಲ ತಾರೆ ಹರಸುತ ನಗುತಲಿ

ಜನ್ಮ ಜನ್ಮದ ಬಂದ ನಮ್ಮದು

ನಾನು ನೀನು ಒಂದೇ ಎಂದಿಗೂ

ಪ್ರಾಯ ಸವೆದರು ನೂರು ವರುಷ

ಬತ್ತಿ ಹೋಗದು ಈ ಪ್ರೀತಿಯ ಹರುಷ

ನೊಂದ ಮನ

ಬೇಕಾದರೆ ತುಂಬಾಪ್ರಯತಿಸಿ ನೊಡು

ಆಗಲ್ಲ,ಕೃತಕವಾಗಿ ನಗುವುದು ಸೂಳೆ

ಸಿಂಗರಿಸಿಕೊಂಡು ಮಡಿವಂತ ಹೆಂಗಸರ

ಮುಂದೆ ಸಾವಿತ್ರಿಯ ಜಪ ಮಾಡಿದಂಗೆ

ನಗು ಏನಿದ್ದರೂ ದೃದಯಕ್ಕೆ ಸಂಬದಿಸಿದ್ದು

ಒಳಗಿಂದ ಚಿಮ್ಮಿದ್ದರೆ ಸ್ಪೂರ್ತಿಯ ಚಿಲುಮೆಯಂತೆ

ಮುಖದಿ ಹೂವಂತೆ ಅರಳಿರುತಿತ್ತು ,ನೀನು

ಮಾಡಿದ ಘಾಸಿಯಾದರೂ ಎಂತದು ನೋಡು

ಪ್ರೀತಿಯಿಂದ ನಗುತ್ತ ಹತ್ತಿರ ಬಂದ ಮಗುವಿಗೆ

ಜಿಗುಟಿದರೆ ಅತ್ತು ಸುಮ್ಮನಾದೀತು

ಸೂಜಿ ಸುಚ್ಚಿದರೆ ? ಮತ್ತೆ ಹತ್ತಿರ ಬಂದೀತೆ?

Friday, August 7, 2009

ಇಂದಿಗೂ

ನಿನ್ನ ವಂಚನೆಯ ನೆರಳಿಗೆ ಎಂಥಾ ಛಾಪು !

ಇಂದಿಗೂ ನರಳುತಿದೆ ಪ್ರೀತಿಯ ಮನ, ನೆನಪಾಗಿ

ಪದವಿಟ್ಟು ಪೊಣಿಸಿದ ನಿನ್ನ ಬರವಸೆಯ ಕವನ

ನಡುದಾರಿಯಲಿ ಎದೆಗೆ ನೀನಿಟ್ಟ ಕೊಳ್ಳಿಯನು ನೆನೆದು

ನಡುರಾತ್ರಿಯಲಿ ಹಿಂಡುತಿದೆ ದೃದಯವನು ಹಿಡಿದು

ನೋಡು, ಹೊತ್ತಿ ಹುರಿಯುತಿದೆ ನನ್ನೊಳಗೆ

ನೀನೇ ಕಟ್ಟಿದ ಕನಸಿನ ಗೂಡು

Thursday, August 6, 2009

ಕಾರಣ

ಭೂಮಿ ತಿರುಗಲು

ರವಿಯ ಪ್ರೀತಿ ಕಾರಣ

ಶಶಿಯ ಹೊಳಪಿಗೂ

ರವಿಯ ಬೆಳಕೇ ಕಾರಣ,

ಹೊರಗೆ ರವಿ ನಗುವ

ಕಾರಣ ತನ್ನೊಳಗೆ ತಾನೆ ಸುಡುವ

ಪ್ರೀತಿಯು ಕವಿದು

ನನ್ನ ದೃದಯದಿ ನೀ ಕುಳಿತು

ಪ್ರೀತಿಯ ಕೊಳಲ ನುಡಿಸಿರುವೆ

ನುಡಿಸಿ-ನುಡಿಸಿ ನನ್ನ ನಗಿಸು

ನುಡಿಸಿ-ನಡೆಸಿ ನನ್ನ ಬದುಕನು ಬೆಳಗಿಸು

ಕನಸಲಿ ನೀ ನನಗೆ ಮುತ್ತಿಟ್ಟರೆ

ನನಸಲಿ ಹರಿಯಿತು ಪ್ರೇಮದ

ವಿದ್ಯುತ್ತು ,ಮೆದುಳಿನಿಂದ ಪಾದದ ವರೆಗು

ನರ-ನಾಡಿ ಜೀವ-ಜೀವದ ಕಣಕೂ

ಹುಚ್ಚನಾದೆ ಪ್ರೀತಿಯು ಕವಿದು

ಎದೆಯೊಳಗೆ ಡವ-ಡವ ಡೊಲು

ಏನೂ ಕಾಣದು ನಿನ್ನನು ಹೊರೆತು

ದಿನವೆಲ್ಲಾ ಬರಿ ಹಗಲುಗನಸು.

ನೆನಪಲ್ಲಿ

ಬಾನಲ್ಲಿ ಹೊಳೆವ ಚುಕ್ಕಿಯಾಗಿ
ನೆನಪಲ್ಲಿ ಸಿಹಿಯ ಸ್ಪರ್ಶವಾಗಿ
ಹೊದಲ್ಲಿ ನನ್ನ ಜೊತೆ ನೀ ಚಿನ್ನ

ಚಿಟ್ಟೆಯ ಮೇಲೆ ಚಿತ್ತರವಾಗಿ
ಹೂವಿನ ಮೇಲೆ ಮಂಜಾಗಿ ಮೂಡಿ
ಆಪ್ಪಿಕೊಳ್ಳುವೆ ನಾ ದಿನವೂ ನಿನ್ನ

ಕತ್ತಲೊಳಗೆ ಬೆಳದಿಂಗಳಾಗಿ
ಒಲವಿನ ವನದೊಳು ಜೋಲಿ ಕಟ್ಟಿ
ತೂಗುವೆ ನಿನ್ನ ಮಲಗೆ ಚಿನ್ನ

ಮೊಹದಿ ಸೆಳೆದು ಕಣ್ಣಲ್ಲೇ ಕರೆದು
ಪ್ರೀತಿಯ ನಶೆಯ ನನ್ನಲ್ಲಿ ತುಂವಿದೆ
ನಾನು ತೇಲಾಡಿದೆ, ಬಾನೆಲ್ಲ ಹಾರಿದೆ

Wednesday, August 5, 2009

ಯಾರು 'ನಿನ್ನಂಗೆ'?

ನಲ್ಲೆ,

ನೀ ಹಾಲಲಿ ತೇಲಿದ

ಬೆಣ್ಣೆಯ ಗೊಂಬೆ

ರತಿ-ಮೇನಕೆ

ಊರ್ವಶಿ-ರಂಭೆ

ಯಾರು ಇಲ್ಲ

'ನಿನ್ನಂಗೆ'

'ಮೈಥುನ'

ಕಲ್ಪನೆಯ ಕಣ್ಣು

ಕಾಮದ ಕಗ್ಗತ್ತಲಲಿ

ಕಂಡ ಸುಂದರ ಕನಸು

'ಮೈಥುನ'

Tuesday, August 4, 2009

ಕುರಿಗಳಲ್ಲ ಪ್ರೇಮಿಗಳು

ಬಾನಿನಲ್ಲಿ ಒಂದು ಗೂಡು ಕಟ್ಟಿ
ಹಕ್ಕಿಯಾಗಿ ಹಾರಿ ಮೋಡ ದಾಟಿ
ಸಾಗೋಣ ಪ್ರೆಮಲೋಕಕೆ
ನಮಗಿಲ್ಲ ಬಂದನ ಯಾರ ಅಂಜಿಕೆ

ನಾನು ನೀನು ಒಂದೆ ಎಂದೂ
ಕೂಡಿ ಬಂತು ಸೇರೊ ಕಾಲ ಇಂದು
ಹಾಡೊಣ ಪ್ರೆಮ ಗೀತೆಯ
ಈ ಪಯಣ ಸಾಗಲಿ ಹೀಗೆಯೇ

ಬಿದಿಗೆ ಚಂದ್ರ ನಗುತಲೆ ಬಂದ
ಬೆಳ್ಳಿ ಬೆಳಕು ನಮಗೆ ತಂದ
ಎದ್ದು ನಿಂತವು ಮೋಡದ ಮರೆಯಲಿ
ಎಲ್ಲ ತಾರೆ ಹರಸುತ ನಗುತಲಿ

ಜನುಮ ಜನುಮದ ಬಂದ ನಮ್ಮದು
ಯಾರು ಬಂದರೂ ಬಿಡಿಸಲಾಗದು
ಬದುಕುವುದು ಜೊತೆಗೆ ,ಸಾಯುವುದು ಒಟ್ಟಿಗೆ
ಕುರಿಗಳಲ್ಲ ಪ್ರೇಮಿಗಳು ನಾವು

ಕರಡಿ -ಕುರುಡಿ

ಬಿಳಿ(ಹಿಮ) ಕರಡಿ

ಕಾಡಿಗೆ ಬಂದರೆ

ಕರಿ ಕರಡಿ ಹೇಳಿತಂತೆ

ಅದಕೆ 'ವಯಸ್ಸಾಗಿದೆ'

ಮುದಿ ಕರಡಿ ಅಂತ

Monday, August 3, 2009

ನೊಟ

ದಿಕ್ಕು-ದೆಸೆಗಳ ಲೆಕ್ಕಿಸದೆ ಎತ್ತೆತ್ತರ

ಮರಗಳಲೆ ಗೂಡು ಕಟ್ಟುವ ಹಕ್ಕಿಗಳ ನೋಡು,

ಆಯಾಮಗಳ ಬಂದನವಿಲ್ಲದೆ ಮನಸ್ಸೇಚ್ಚೆ

ಹೆಣೆಯುತಿದೆ ಸುಂದರ ಬಲೆಯ ಜೇಡು ,

ಮುಕ್ತ ಮನದಿ ಒಟ್ಟಿಗೆ ದುಡಿದರೆ ಗೆಲುವಿದೆ,

ನಮ್ಮೊಡನೆ ಬದುಕುವ ಗೆದ್ದಲು-ಇರುವೆಗಳ ನೋಡು

Sunday, August 2, 2009

ವಾಸ್ತವ

ಮನುಜ ಮಾತ್ರ ನೊಡುವುದು

ಜ್ಯೊತಿಷ್ಯ-ಗ್ರಹಗತಿ-'ವಾಸ್ತು'ವ

ಮನೆ ಕಟ್ಟಲು, ಮಲಗಲು,ತಿನ್ನಲು,

ತಿರುಗಲು,ಮಗ್ಗಲು ತಿರುಗಿಸಿ ಮುಖ ನೊಡಲು

ಮಕ್ಕಳಿಗೆ ಹೆಸರಿಡಲು, ಮದುವೆ, ಮುಂಜಿ, ಪ್ರಸ್ತ,

ಸತ್ತರೂ ಕೊನೆಗೆ ಕಳೆದು ವಾನಪ್ರಸ್ತ

ಮಿತಿ ಬೇಕು, ಬಿಡಿ 'ಡಾಂಭಿಕತೆ'

ನಿತ್ಯ ಬದುಕಿನ ಸುಂದರ ಸತ್ವ-ಸಾರವ ಬಿಟ್ಟು

ಯಾರದೊ ಮಾತಿಗೆ ಮನಸಿನ ನಿತ್ರಾಣ,

ಸಹಜ ಸ್ವತಂತ್ರ ಬಾವಗಳ ಬಂದಿಸಿ

ನಾವು ಬಧುಕುವುದು ಏಕೆ?

ಮತ್ಯರೋ ಮಾತಲ್ಲೆ ನಮ್ಮನ್ನು

ಯಾಂತ್ರಿಕವಾಗಿ ನಿಯಂತ್ರಿಸುವುದು ಬೇಕೆ?

ಸುಳಿವೇ ನೀಡದೆ ಸುತ್ತಿ ಬಂದೆರಗುವ

ಸುನಾಮಿ-ಭೂಕಂಪಗಳನು ತಡೆಯಲಾರದು

ಯಾವ ಜ್ಯೊತಿಷಿಯ 'ವಾಸ್ತು'ವು

ಬದುಕೇ ಅಂಗೆ, ಅನಿರೀಕ್ಷಿತವಾಗಿ ಬರುವ

ಸಾಗರದ ಅಲೆಗಳಂಗೆ,

ಇರಬೇಕು ಹಕ್ಕಿ ರೆಕ್ಕೆ-ಪುಕ್ಕಗಳ ಬಿಚ್ಚಿ ಹಾರಿದಂತೆ

ಪ್ರತಿಕ್ಷಣವು ನಕ್ಕು-ನಗಿಸುತ,

ಸ್ನೆಹ-ಪ್ರೀತಿ-ನೀತಿಗಳ ಹಂಚುತ

ಆಗಲೇ ಬದುಕು ಸಾರ್ಥಕ,

ಇದೇ ನಿತ್ಯ ಜೀವನದ 'ಸತ್ಯ-ವಾಸ್ತವ'.

ಭುವನ ಸುಂದರಿ

ಪ್ರೀತಿಯ ಕಡಲಲ್ಲಿ
ನೀ ಮಿಂದು ಬರಲು
ಬೆರಗಾಗಿ ನೊಡಿದವು
ಬಾನು-ಭುವಿಗಳು ಬೆರೆತು
ಆ ಸೂರ್ಯನೂ ಮಂಕಾದ
ನಿನ್ನ ಚೆಲುವನು ನೋಡಿ
ಮೈಮರೆತು , ನಿನ್ನ ನಸುನಕ್ಕ
ತುಟಿಗಳಿಗೆ ಅಪ್ಪಿಮುತ್ತಿಡಲು
ಕಾತುರದಿ ಬರುತಿಹವು ಆತುರದಿ
ಅಲೆಅಲೆಯು,ಆ ಅಲೆಯ ಬಿಂಬಗಳೆ
ನನ್ನ ಮನಸಿನ ಆಗಸದ ತುಂಬ
ರಂಗು-ರಂಗಾಗಿ ಚೆಲ್ಲಿವೆ, ಆಸೆ
ನಸುಗೆಂಪು ಬೆಳ್ಳಿಮೊಡದ ಒಳಗೆ ,
ಕಾದು ಕುಳಿತಿರುವೆ ಬಾ ಹಾಸಿ ,
ಒಲವನ್ನು ಕಾಮನ ಬಿಲ್ಲ ಕೆಳಗೆ
ತುಂಬಿ ಕೊಡು ಕೆಂಪು ತುಟಿಯಲಿ
ಅಮೃತ ವ ನಂಗೆ , ಸುರಿಯುವೆ
ಮಳೆಯಾಗಿ ಮತ್ತೆ ಅಪ್ಪಿಕೊ
ನೀ ಭುವಿಯಾಗಿ ಅಂಗೆ
ನದಿಯಾಗಿ-ಝರಿಯಾಗಿ,
ತೊರೆಯಾಗಿ-ಜೀವ ಜಲವಾಗಿ
ಹರಿವೆ, ನಮ್ಮ ಪ್ರೀತಿಯ ವಿಷಯ
ಭುವಿಗೆಲ್ಲಾ ಹೇಳಿ ನಿನ್ನೆದೆಯ
ಕಡಲಿಗೆ ಮತ್ತೆ ನಾ ಬರುವೆ
ಈ ಸೃಷ್ಟಿ ಚಲನೆಯ ಒಳಗೆ
ಸೂರ್ಯ-ಚಂದ್ರ-ನಕ್ಶತ್ರ ಗಳಿರುವವರೆಗೆ
ನಾ ನಿನ್ನ ಜೊತೆ ಇರುವೆ ಕೊನೆವರೆಗೆ .


Saturday, August 1, 2009

ನ ಸ್ವ(ಶ್ವ)ರ

ಗುಂಡಣ್ಣ ಕುಡಿದಾಗ

ಕೂಗುತ್ತಾನೆ

'ಬದುಕೇ ನಶ್ವರ '

ಹೆಂಡತಿ ಮುಂದೆ

ಬಂದಾಗ

ನ ಸ್ವರ

'ವೇದಾ'- ಅಂತ

ಸ್ವರ್ಗ ನರಕ ವೇನೆಂದು ತಿಳಿಯಲು
ಆತ್ಮ ಪರಮಾತ್ಮನನ್ನು ಅರಿಯಲು
ದಾರ್ಶನಿಕರು ವರ್ಷಗಟ್ಟಲೆ ಅಲೆಯುತ್ತಾರೆ
ದೇಶಾಂತರ ದೇವಾಲಯಗಳನ್ನು ,
ಸುಮ್ಮನೆ ಓದುತ್ತಾರೆ ಬದುಕೆಲ್ಲ 'ವೇದಾಂತ' ಗಳನ್ನೂ

ನಗಗೆ ಮೂರೇ ತಿಂಗಳಿಗೆ ,
'ಸ್ವರ್ಗ-ನರಕದ' ಅರಿವಾಯಿತು
ಕೇಳದೆಯೂ ' ಕಾಳಿ 'ಯ ದರ್ಶನವಾಯಿತು ..!

ನಾನೇನು ಮಾಡಲಿಲ್ಲ ಮದುವೆಯಾದೆ
ನನ್ನ ಹೆಂಡ್ತಿ 'ವೇದಾ' ಳನ್ನು

ನೊಂದವಳು

ಎಲ್ಲರೂ ತಂದರು
ಒಂದು ಮಾರು ಹೂ
ಒಂದು ತೆಂಗಿನ ಕಾಯಿ
ಅದ್ರ ಬೆಲೆ ಕೆವಲ ಹತ್ತು ರುಪಾಯಿ,
ಬಂದವರು ಐನೂರು ಜನ
ಅದರ ಒಟ್ಟು ಮೊತ್ತ ಐದು ಸಾವಿರ ರೂಪಾಯಿ
ಬದುಕಿದ್ದಾಗ ಕೊಟ್ಟಿದ್ದರೆ ಸಾಕಿತ್ತು ಔಷಧಿಗೆ
ಕೇವಲ ನೂರು ರೂಪಾಯಿ
ಬಕುಳಿಯುತಿದ್ದಳು ಆ ಮಹಾ-ತಾಯಿ

ತುಕ್ಕಿಡಿದ ಕಬ್ಬಿಣದಂತೆ

ಹಣದಿಂದ ಬಂಗಾರವಾಯಿತು ಬದುಕು

ಹೊಸ ಕಾರು,ಬಂಗಲೆ, ಬೈಕು

ಎನೂ ಮಾಡುವಂತಿಲ್ಲ ಎಲ್ಲದಕೂ ಆಳುಕಾಳು

ಸುಮ್ಮನಿದ್ದರೆ ನೀವು ಹಾಗೆ ತುಕ್ಕಿಡಿದ ಕಬ್ಬಿಣದಂತೆ

ಸುಮ್ಮನಾಗಬಹುದು ನಿಮ್ಮ ಕೈಕಾಲು-ದ್ರುದಯ-ಮೆದುಳು,

ನಮಗಿನ್ನು ಕೆಲಸವಿಲ್ಲವೆಂದು ಮೂತ್ರ-ಪಿಂಡ ನರ-ನಾಡಿಗಳ ಜೊತೆ ತಣ್ಣಗಾದರೆ ಮನಸು

ಮತ್ತೆ ಏಳುವುದು ಬರೀ ಕನಸು..!

Friday, July 31, 2009

ಬೆಳಕಿನೆಡೆಗೆ

ಬಡವರ ಮನೆಯ ದೀಪ ಮಣ್ಣಿನದು
ಧನಿಕನ ಮನೆಯ ದೀಪ ಬಂಗಾರದ್ಹು,
ಎರಡರ ಬೆಳಕು ಒಂದೇ..ಕಣ್ಣಿದ್ದರೂ ಕುರುಡಾದ ನಮಗೆ ,
ಮಂಕು ಕವಿದ ಮನಕೆ..ಒಳ್ಳೆಯ ಕನಸು ಬೀಳುವುದಾದರು ಹೇಗೆ?

ಹಣದಿಂದ ಬದಲಾಗಬಹುದು ಬದುಕು..ಬಾವನೆಗಳಲ್ಲ,
'ಧನಿಕನ-ಹಸಿವು' 'ಬಡವನ-ಹಸಿವು'ಎಂದು ಬೇರೆಯಿಲ್ಲ 'ಒಂದೇ ಎರಡು'

ಬದಲಾಗಬೇಕು ನಾವು ತಿಳಿದು ತಿಳಿಯಾಗಿಸಿ ಮನಸೆಂಬ-ನೀರು
ಅಂತರಾಳವ ತೊಳೆದು.. ವಿಶ್ವವೆಲ್ಲ ಒಂದಾಗಬೇಕು ಇಂದು
ಗಡಿರೇಖೆ ಗಳ ಹರಿದು .. ಜಾತಿ ಧರ್ಮ ಬಾಷೆ ಬೇದ-ಬಾವಗಳ ತೊರೆದು
ಆಗ ಮಾತ್ರ ಮುಂದಿನ ಪೀಳಿಗೆ ಬದುಕಬಹುದು ..ನಾಗರೀಕತೆಯೂ ಉಳಿದು..!

ಗ್ರಹಚಾರ

ಊರ ಜನರಿಗೆಲ್ಲ
ಸೂರ್ಯ- ಚಂದ್ರ-ನಕ್ಷತ್ರ ತೋರಿಸಿ ,
ಗ್ರಹ ಗತಿ ಗಳನ್ನೂ ಗುಣಿಸಿ,
ಮದುವೆ ಮಾಡಿದ 'ಜ್ಯೋತಿಷಿ '
ಎಷ್ಟೇ ಪೂಜೆ , ವ್ರತ ,ಹವನ ಮಾಡಿ
ಮುಹೂರ್ತವಿಟ್ಟರೂ ಯಾಕೊ
ಮಧುವೆಯೇ ಆಗಲಿಲ್ಲ ಇನ್ನೂ
ಅವರ ಒಬ್ಬಳೇ ಸುಪುತ್ರಿ 'ಜ್ಯೋತಿ'

Sunday, July 19, 2009

ಪ್ರೀತಿಯ ಸೋನೆ

ಹನಿ ಹನಿ ಪ್ರೀತಿಯ ಹನಿಗಳು ಚೆಲುವೆ
ಪ್ರೀತಿಯ ಮಳೆಯಲಿ ನೆಂದಿರುವೆ
ಚಳಿ-ಚಳಿಯಾಗಿದೆ ಅಪ್ಪಿಕೊ ಬಾರೆ,
ಒಲವಿನ ಮುತ್ತನು ನಾಕೊಡುವೆ

ಮನಸಲಿ ಮೂಡಿದೆ ನಿನ್ನದೇ ಚಿತ್ರ
ನಿನ್ನ ನಗುವೇ ನನಗೆ ಪ್ರೇಮದ ಪತ್ರ
ನಿನ್ನಲಿ ಬೆರೆತು ಬೆವೆಯುವ ತವಕ
ನಿಲ್ಲದು-ನಿಲ್ಲದು ನಾನಿನ್ನ ಸೇರುವ ತನಕ

ಈ ಉಸಿರ ಕಣ-ಕಣದಲ್ಲೂ
ನಿನ್ನೆಸರೇ ತೇಲುತಿದೆ
ಈ ದೃದಯ ಪ್ರತಿ-ಮಿಡಿತದಲೂ
ನಿನ್ನೆನಪೇ ಮೂಡುತಿದೆ
ನಗುನಗುತಲೇ ನನ್ನ ನೀ ಸೆಳೆದೆ
ಕಣ್ಣಲೇ ನನ್ನ ಬಂದಿಸಿದೆ

ನನಗಾಗೇ ನೀ ಜನಿಸಿರುವೆ ಬಾರೆ
ವಿರಹದ ಬುಗಿಯಲಿ ಬೆಂದಿರುವೆ
ಬಿಡುಗಡೆಗಾಗಿ ಕಾದಿರುವೆ
ಬಿಡಿಸುಬಾರೆ ನನ್ನೊಲವೆ

ಹನಿ ಹನಿ ಪ್ರೀತಿಯ ಹನಿಗಳು ಚೆಲುವೆ
ಪ್ರೀತಿಯ ಮಳೆಯಲಿ ನೆಂದಿರುವೆ
ಚಳಿ-ಚಳಿಯಾಗಿದೆ ಅಪ್ಪಿಕೊ ಬಾರೆ,
ಒಲವಿನ ಮುತ್ತನು ನಾಕೊಡುವೆ

ದೇವರು

ಗುಡಿ ಘಂಟೆ ಗೋಪುರದ ಕೆಳಗೆ
ಮಸೀದಿ ಚರ್ಚು ಪ್ರರ್ಥನಾಲಯದ ಒಳಗೆ ,
ಸಿಗಲಿಲ್ಲ ನೀನು ಹುಡುಕಿದರೂ ನನಗೆ

ಹುಡುಕಿದೆ ನಿನ್ನ ಕುಂಕುಮ ತೀರ್ಥ ಪ್ರಸಾಧದೊಳಗೆ
ನಿನಗಾಗಿ ಅರ್ಪಿಸಿದ ಯಜ್ಞ ಕುಂಡದ ಕೆಳಗೆ ,
ಸಿಗಲಿಲ್ಲ ನೀನು ಅಧರಲ್ಲೂ ನನಗೆ

ಆರ್ಥ ನಾದಧಿ ಅಳುವ ಹಸಿದ ಹೊಟ್ಟೆಗಳಿಗೆ
ನಾ ಮನಬಿಚ್ಚಿ ಪ್ರೀತಿಯ ಕೈತುತ್ತು ನೀಡಿದೆ ,
ಆ ಕ್ಷಣದಿ ಆ ನಗುವ ಮುಖದಲ್ಲಿ ನಾ ನಿನ್ನ ಬೆಳಕಾಗಿ ಕಂಡೆ !

'ಜ್ಞಾನೋಧಯ'

ಇತರರ ಬದುಕಿನ
ಅಣು ಪರಮಾಣುಗಲೋಳಗೂ
ಇಣುಕಿ ನೋಡುವ ಮಂಗ ಮನ,
ಮೊದಲು ತನ್ನೊಳಗೆ ತಾನು ಇನುಕಿನೋಡಿದ ಕ್ಷಣ ,
ಆಗುವ ಅನುಭವಗಳ ಸತ್ಯ 'ಜ್ಞಾನೋಧಯ'

ಕಾಲ

ಮೂದಲಿಸಿದ ಚಿಗುರೆಲೆಗೆ ,
ಉದುರುವ ಹಣ್ಣೆಲೆ
ಹೇಳಿದ ಮಾತು ಒಂದೇ ,
ನಿನಗೂ ಕಾದಿದೆ ಮುಪ್ಪು ಮುಂದೆ !

ಗೊರಕೆ

ಹತ್ತು ಗಂಟೆಗೆ ಬಿದ್ದೆ
ಐದು ಗಂಟೆಗೆ ಎದ್ದೆ
ಬೆಳಕು ಕತ್ತಲ ನಡುವೆ
ಎಳೆಯುತಿತ್ತು ಸೊಂಪಾದ ನಿದ್ದೆ

ಮತ್ತೆ ಮಲಗಲು ಬಿದ್ದೆ
ಹಾಸಿಗೆಯ ಮದ್ಯೆ
ಬರಲಿಲ್ಲ ನಿದ್ದೆ ,
ಕೇಳಿಸಿದ್ದು ಬರೀ ಗೊರಕೆಗಳ ಸದ್ದೇ ..

ಗುಂಡು

'ಗುಂಡು' ಎಂದರೆ
ಕುಡುಕರಿಗೆ ಪ್ರೀತಿ ಅಪಾರ !
ಗುಂಡಿಗೆ ಬಿದ್ಹು ನಶೆ ಇಳಿದರೆ
ಉಚಿತ ನೋವು ಅಪಾರ ..ಅಹಾಕಾರ !

Saturday, July 18, 2009

ಖಾನವಳಿ

ಹುಡುಗರಿಗೆ ಮನೆಯಿದ್ದರೂ
ಖಾನವಳಿಯಲೇ ಖಾನ-ಪೀನ!
ಕಾರಣ ಬಡಿಸುವಾಗ ಕಾಣುವ
ಆಂಟಿಯ ಅಂಗ ಪ್ರದರ್ಶನ !

ಹೆಣ್ಣೇ? ನೀ ಗಂಡೇ?

ಇಂದು
'ಸರಿ?' ಎಂದರು
ಸಲಿಂಗ ರತಿ
ನಾಳೆ?,
ಯಾರು ಗಂಡು?
ಯಾರು ಹೆಣ್ಣು?
ಎಂದು
ಹುಡುಕುವುದೇ
ಪಜೀತಿ !

ಕೋಪ

ಸಮುದ್ರ ಮಥನದ
ವಿಷದಂತೆ 'ಕೋಪ'
ಅದನು ತಡೆಯಲು
ಹಿಡಿಯಲು ,ಕುಡಿಯಲು
'ಸ್ವತ ಶಿವನೀ' ಆಗಬೇಕು
ಇಲ್ಲವೇ ಶಿವನ ಪಾದ ಸೇರಬೇಕು !

ಅಳಲು

ಬೇಕೆಂದರೂ
ಬರುವುದಿಲ್ಲ
'ಮಳೆ'
ಕಾರಣ?
ಏಲ್ಲಿದೆ
ಗಿಡ ಮರ
ಜೀವ-ಸಂಕುಲಕೆ
'ನೆಲೆ?'

ತತ್ವ-ಜ್ಞಾನ

ಬದುಕು
ಎರಡೇ
ಪದದ
'ಕವನ-ಸಂಕಲನ'
ಅದರ ಹೆಸರೇ
'ಜನನ-ಮರಣ'

"ಪರಿ-ವರ್ತನೆ"

ನೆಟ್ಟಾಗ
ಅದು
ಬರೀ
ಗಿಡ,
ಹೂ ಬಿಟ್ಟಾಗ
ಅದೊಂದು
ಕವನ